Saturday, June 28, 2014

ಮುಂಜಾನೆಯ ಕಮಿಟ್ ಮೆಂಟ್

ಇವತ್ತು ಬೆಳಗ್ಗೆ ಬೆಳಗ್ಗೆಯೇ ಏನೊ ಒಂದು ಫುಲ್ಲ್ ಕಮಿಟ್ಮೆಂಟ್ ಬಂದಿತ್ತು. ವೀಕೆಂಡ್ ನಲ್ಲಿ ಬೇರೇನೂ ಪ್ರೋಗ್ರಾಮ್ ಇಲ್ಲ, ಅಲ್ಪ-ಸ್ವಲ್ಪ ಓದಿ ಬುದ್ಧಿವಂತನಾಗೋಣ ಎಂದು ಮನಸ್ಸಿನಲ್ಲೇ ಪಣ ತೊಟ್ಟಿದ್ದೆ. ಹಾಸಿಗೆಯನ್ನೆಲ್ಲ ಇವತ್ತು ಸ್ವಲ್ಪ ಜಾಸ್ತಿಯೇ ನೀಟ್ ಆಗಿ ಬದಿಗಿಟ್ಟು, ಎರಡು ಬಾರಿ ಜೋರಾಗಿ ಉಸಿರೆಳೆದು ಮನಸ್ಸನ್ನ ಕೂಲ್ ಮಾಡಿಕೊಂಡೆ. ಮೈ ಮುರಿಯಿವುದು ಆಲಸ್ಯದ ಸಂಕೇತವಲ್ಲವೆ, ಅದಕ್ಕಾಗಿ ನಿಂತಲ್ಲೆ ಸ್ವಲ್ಪ ಜಾಗ್ ಮಾಡಿ ಬದ್ದತೆಯ ಗಾಂಭೀರ್ಯತೆಯನ್ನ ಉಳಿಸಿಕೊಂಡೆ. ಹಲ್ಲುಜ್ಜುವಾಗಲು ಓದುವ ವಿಚಾರದಲ್ಲೆ ಮುಳುಗಿದ್ದೆ, ಯಾವ ವಿಷಯ ಓದಬೇಕು, ಯಾವ ಟೊಪಿಕ್ ಮೇಲೆ ಜಾಸ್ತಿ ಗಮನ ಹರಿಸಬೇಕು, ಇಡೀ ದಿನದಲ್ಲಿ ಯಾವ್ಯಾವ್ ಟೈಮ್ ನಲ್ಲಿ ಎಷ್ಟೊತ್ತು ಓದಬೇಕು ಎಂಬ ಸುದೀರ್ಘ ಯೋಚನೆಯಲ್ಲಿ ಹತ್ತಾರು ನಿಮಿಷ ಬ್ರಷ್ ಮಾಡಿಬಿಟ್ಟೆ. ಇನ್ನೇನು ತಿಂಡಿ ತಿಂದು ಓದಲು ಶುರು ಮಾಡಲೇಬೇಕು ಎಂದು, ನಿನ್ನೆ ಗೂಗಲ್ ನ್ಯೂಸ್ ನಲ್ಲಿ ಓದಿದ್ದ ಸುದ್ದಿ ಸಮಾಚಾರಗಳನ್ನೆಲ್ಲ, ಪತ್ರಿಕೆಗಳಲ್ಲೂ ಮತ್ತೊಮ್ಮೆ ಬೇಗ ಬೇಗ ಕಣ್ಣು ಹಾಯಿಸಿಬಿಟ್ಟೆ.

ಏನೇ ಆಗಲಿ-ಹೋಗಲಿ, ಈ ದಿನ ಪೂರ್ತಿ ಓದಬೇಕಲ್ಲವೆ, ಅದಕ್ಕಾಗಿಯೆ ಹೊಟ್ಟೆ ತುಂಬಿದಂತಾದರೂ ಇನ್ನೊಂದು ದೋಸೆ ಇಳಿಸಿಯೆ ಬಿಟ್ಟೆ. ಓದಿನ ಮಧ್ಯೆ ಹಸಿವಾದರೆ ಮತ್ತೆ ಏಳುವುದು, ನನ್ನ ಏಕಾಗ್ರತೆಗೆ ಭಂಗವಾಗುವುದನ್ನೆಲ್ಲ ತಡೆಯಬೇಕು ನೋಡಿ. ಟೀ ಕೂಡ ಇವತ್ತು ಸ್ವಲ್ಪ ಸ್ಟ್ರಾಂಗ್ ಆಗೇ ಬಿದ್ದಿತ್ತು. ಹಸಿವು-ನಿದ್ದೆ ಬಿಟ್ಟರೆ ಇನ್ಯಾರು ಓದಿಗೆ ತೊಂದರೆ ಕೊಡುವವರು. ಮನಸ್ಸಿನಲ್ಲಿ ಓದಿ ಸ್ವಲ್ಪ ಬುದ್ಧಿವಂತನಾಗಬೇಕೆನ್ನುವ ಛಲ ಅಂತೂ ಇದ್ದೇ ಇದೆ. ಏನೇನು ಓದಬೇಕು, ಹೇಗೆ ಓದಬೇಕು ಎನ್ನುವ ಬ್ರಾಡ್ ಐಡಿಯಾ ರೆಡಿ ಇದೆ. ಇವತ್ತಂತೂ ನನ್ನ ಜ್ಞಾನ ಭಂಡಾರಕ್ಕೆ ಒಂದು ಚಿನ್ನದ ನಾಣ್ಯ ಬೀಳುವುದಂತೂ ಖಚಿತ ಅನಿಸಿತು.


ಮತ್ತೆಲ್ಲಾ ಸೆಟ್ ಆಯ್ತು. ಒಂದು ಚೇರ್, ಬುಕ್, ಹೆಚ್ಚಿನ ರೆಫ಼ರೆನ್ಸ್ ಗಾಗಿ ಜೊತೆಗೆ ಗೂಗಲ್ ರೆಡಿಯಾಗಿ ಮುಂದಿತ್ತು. ಚೇರ್ ಮೇಲೆ ಕುಳಿತು ಬುಕ್ ಕೈಗೆತ್ತುಕೊಳ್ಳುವುದರಲ್ಲೆ ಏನೊ ಅನ್ ಕಮ್ಫ಼ರ್ಟೆಬಲ್ ಫೀಲ್ ಆಯ್ತು. ಖುರ್ಚಿ ಯಾಕೊ ಸರಿ ಇಲ್ಲ ಅನ್ನಿಸಿತ್ತು. ಈ  ರೀತಿ ದಿನವಿಡೀ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದುಕೊಂಡು, ಖುರ್ಚಿಯನ್ನೇ ಬದಲಾಯಿಸಿದೆ. ಮೂರ್ನಾಲ್ಕರಲ್ಲಿ ಎಲ್ಲವೂ ಅಲವರಿಕೆಯೆ. ಒಂದೂ ಕಮ್ಫ಼ರ್ಟೆಬಲ್ ಇಲ್ಲ. ಚೇರ್ ಗಳ ಮೇಲೆ ಬ್ಲಾಂಕೆಟ್, ಕಂಬಳಿ ಸಂಯೋಜನೆಗಳನ್ನೆಲ್ಲ ಪ್ರಯೋಗ ಮಾಡಿ ಬಿಟ್ಟೆ. ಯಾವುದೇ 
ಕಾಂಬಿನೆಷನ್ ಕೂಡ ಆರಾಮದಾಯಕವಾಗಿಲ್ಲ. ಕುಳಿತುಕೊಳ್ಳಲು ಸರಿಯಾಗದಿದ್ದ ಮೇಲೆ ಓದುವುದಾದರೂ ಹೇಗೆ, ಅದೂ ದಿನವಿಡೀ ಅಸಾಧ್ಯವಲ್ಲವೆ. ನನ್ನ ಜ್ಞಾನ ಭಂಡಾರಕ್ಕೆ ಅಮೂಲ್ಯ ರತ್ನಗಳ ಅವಶ್ಯಕತೆ, ಅನಿವಾರ್ಯತೆಗಳಿದ್ದರೂ, ಸಾಕಷ್ಟು ಅಡ್ಡಿ-ಆತಂಕಗಳೂ ಸಹ ಅತ್ಯಂತ ಗಂಭೀರ ಸಮಸ್ಯೆಯಾಗಿ ಕಾಡುತ್ತಿವೆ. ಅಷ್ಟಕ್ಕೂ ಸರಿಯಾಗಿ ಕುಳಿತುಕೊಳ್ಳದೆ ಗಂಭೀರವಾಗಿ, ಏಕಾಗ್ರತೆಯಿಂದ ಓದಲು ಸಾಧ್ಯವೆ, ಟಿವಿ ಯಾದರೆ ಹೇಗೆ ಕುಳಿತರೂ ಆರಾಮವಾಗೆ ನೋಡಿಬಿಡಬಹುದು.

Thursday, February 27, 2014

ನಿದ್ದೆ ಬರದಾ ರಾತ್ರಿ


ನಿದ್ದೆ ಬರದ ಆ ರಾತ್ರಿಯೆಲ್ಲ ಕಳೆದುಕೊಂಡ, ಕಳೆದುಕೊಳ್ಳುತ್ತಿರುವ ಖುಶಿಯ ನೆನಪಲ್ಲೆ ಕಳೆಯುತ್ತಿತ್ತು. ಈ ನಿದ್ದೆ ಬರದ ರಾತ್ರಿಗಳಲ್ಲಿ ನಿರಾಸೆಯ ವಿಚಾರಗಳು ತುಂಬುತ್ತದೊ ಅಥವ ಈ ನಿರಾಸೆಯ ವಿಚಾರಗಳೆ ನಿದ್ದೆಗೆಡಿಸುತ್ತದೊ ಎನ್ನುವುದು ಇನ್ನೂ ನನ್ನಲ್ಲಿರುವ ಪ್ರಶ್ನೆ. ಹಾಸಿಗೆಯಲ್ಲಿ ಬಿದ್ದು ಒಂದು ಘಂಟೆಯೆ ಆಗಿರಬಹುದೆಂದು ಅಂದಾಜಿಸಿದೆ. ಅಷ್ಟರಲ್ಲೆ ಒಂದು sad ಸ್ಟೋರಿಯ ವಿಸ್ತ್ರುತ ಹೈಲೈಟ್ ಮುಗಿದಿತ್ತು.ಅಂತೂ ಮುಗೀತಲ್ಲ ಎಂದು ಸ್ವಲ್ಪ ನೆಮ್ಮದಿಯಿಂದ ಕಣ್ಮುಚ್ಚಿದರೆ, ಮತ್ತೊಂದು ಘಂಟೆ ಸುಮಾರಿಗೆ ಅದೇ ಹೈಲೈಟ್ಸ್ ನನಗರಿವಿಲ್ಲದೆ ಮರುಕಳಿಸುತ್ತಿತ್ತು. ಹೊತ್ತು ಗೊತ್ತಿಲ್ಲದೆ ಟೀ ಕುಡಿದರೆ ನಿದ್ದೆ ಹೇಗೆ ಬಂದೀತು ಎಂದು ನನಗೇ ಬೈದುಕೊಂಡೆ.

ಇಷ್ಟು ಹೊತ್ತಂತೂ ಹೀಗೇ ಕಳೆದೋಯ್ತು, ಇನ್ನಾದರು ನಿರಾಲೋಚಿತನಾಗಿ, ನಿರಾತಂಕವಾಗಿ ನಿದ್ದೆಗೆ ಜಾರೋಣವೆಂದು ದ್ರುಢ ನಿರ್ಧಾರ ಮಾಡೆ ಬಿಟ್ಟೆ. ಅಷ್ಟರಲ್ಲೆ ಬ್ಯಾಕ್ ಗ್ರೌಂಡ್ ನಲ್ಲಿ ಕುಯ್ಯ್ ಎನ್ನುತ್ತಿದ್ದ ನುಷಿ ಹೊಡೆಯಲು ಕಣ್ತೆರೆದರೆ ಎಲ್ಲೆಲ್ಲೂ ಕಗ್ಗತ್ತಲೆ. ಹಾಗೆ ಮೂರ್ನಾಲ್ಕು ಬಾರಿ ಕಣ್ಮುಚ್ಚಿ ಕಣ್ತೆರೆದೆ. ಎಲ್ಲವೂ ಒಂದೆ. ಕತ್ತಲು. ಇನ್ನೊಂದು ಬಾರಿ ಕಣ್ಮುಚ್ಚಿ ತೆರೆಯುವ ಪ್ರಯತ್ನ ಮಾಡೋಣವೆಂದರೆ, ಈಗಿನ ಸ್ಥಿತಿಯೇ ತಿಳಿಯದಂತಾಯ್ತು. ಕಣ್ಮುಚ್ಚಿರುವೆನೋ? ತೆರೆದಿರುವೆನೊ? ಈ ಬಾರಿ ಕಣ್ಣ ರೆಪ್ಪೆ ಹುಬ್ಬಿಗೆ ಬಡಿಯುವಂತೆ ಗಟ್ಟಿಯಾಗಿ ಕಣ್ತೆರೆದೆ. ಕಣ್ತೆರೆದ ಅನುಭವ ಈಗ ಸ್ವಲ್ಪ ಆಯ್ತು. ಆದರೂ ನಿದ್ದೆಯಾಕೋ ಬರುವಂತೆ ಕಾಣುತ್ತಿಲ್ಲ. ಸ್ವಲ್ಪ ಸೆಖೆ ಬೇರೆ. ಹೊದೆದ ಚಾದರವನ್ನು ಪಕ್ಕಕ್ಕೆಸೆದೆ. ಅಲ್ಲೇ ನೆಲಕ್ಕೆ ಉರುಳಿ ವಾಪಸ್ ಹಾಸಿಗೆಗೆ ಬಂದೆ. ತಂಪು ನೆಲದಿಂದ ಮೈ ಸ್ವಲ್ಪ ತಂಪಾದರೂ ಬೆನ್ನ ಮಧ್ಯೆ ಏನೋ ಚುಚ್ಚಿತ್ತು.


ಇಷ್ಟೆಲ್ಲ ನಿರಾಶನಾಗಿರುವ ನನಗೆ ನಿಜವಾಗಿಯೂ ಅಂಥದ್ದೇನಾಗಿದೆ ಎಂಬ ವಿಚಾರ ನಂತರ ಬರಲಾರಂಭಿಸಿತು. ಹಾಸಿಗೆಯಲ್ಲೇ ಮಲಗಿದ್ದೇನೆ. ಹೊದೆಯಲು ಚಾದರವಿದೆ. ಬಾಯರಿಕೆಯಾದರೆ ಪಕ್ಕದಲ್ಲೇ ನೀರಿದೆ. ರಾತ್ರಿ ಬೇರೆ ಹೊಟ್ಟೆ ಬಿರಿ ಊಟ ಮಾದಿದ್ದೇನೆ. ಖುಷಿಯಿಂದ ಮಾತನಾಡಿಸುವ ಜನ, ಮನರಂಜನೆಗೆ ಹತ್ತಾರು ಮಾಧ್ಯಮಗಳು, ಇವೆಲ್ಲ ಇವೆಯಲ್ಲ ಅಂದುಕೊಳ್ಳುವಷ್ಟರಲ್ಲಿ ಒಂದು ಅದ್ಭುತ ನಿದ್ದೆ ಜಂಪಿಗೆ ಮೈ ನಡುಗಿತ್ತು. ಓಹೋ ನಿದ್ದೆಯ ಗುಟ್ಟು ಇದೇ ಇರಬಹುದು ನೋಡಿ ಅನ್ನುವಷ್ಟರಲ್ಲಿ ಬೆಳಕೇ ಮನೆ ತುಂಬಾ ಹರಡಿತ್ತು.

Monday, July 11, 2011

ಪೆದ್ದು-ಪೆದ್ದಾಗಿ ನಾವು ಬಂದ ನೆನಪುಗಳು

ಅನುಭವವಿಲ್ಲದೆ ಯಾವುದಾದರು ಕೆಲಸ ಆರಂಭಿಸುವುದು, ಕೆಲಸದ ಚಿಕ್ಕ-ಚಿಕ್ಕ ಭಾಗಗಳನ್ನೆಲ್ಲ ಕಷ್ಟಪಟ್ಟು ಒಂದೊಂದಾಗಿ ಮುಗಿಸುವುದು, ಸಾಸಿವೆಯಷ್ಟು ಅನುಭವಗಳನ್ನೆಲ್ಲ ಕೂಡಿಹಾಕಿ ಮುಂದೆ ಹೆಜ್ಜೆ ಇಡುತ್ತ ಸಾಗುವುದು. ನಮ್ಮ ಗುರಿ ಸಾಧಿಸುವಷ್ಟರಲ್ಲಿ ಜೊತೆಯಲ್ಲಿ ನಡೆದವರ ನೆನಪುಗಳು, ಕೈ ಹಿಡಿದು ನಡೆಸಿದ ನೆನಪುಗಳು, ಆತಂಕ ಹುಟ್ಟಿಸಿದ ಕ್ಶಣಗಳ ನೆನಪುಗಳು ನಮಗೆ ಬೇಕಾದ ಫಲಿತಾಂಶಕ್ಕಿಂತ ಹೆಚ್ಚು ನಮ್ಮಲ್ಲಿ ಉಳಿದು ಬಿಡುತ್ತವೆ.

     ಈ ವಿಶಾಲ ಜಗತ್ತಿನಲ್ಲಿ ನನ್ನ ಪ್ರಪಂಚವೆ ಬೇರೆ, ನಿಮ್ಮ ಪ್ರಪಂಚವೆ ಬೇರೆ ಎನ್ನುವುದು ಸ್ವಲ್ಪ ಮಟ್ಟಿಗೆ ನಿಜವೆ. ನಾವು ಹುಟ್ಟಿ ಬೆಳೆದ ಜಾಗ, ಸ್ನೇಹಿತರೊಡನೆಯ ಒಡನಾಟ ಸೃಷ್ಟಿಸುವ ನಮ್ಮ ಪ್ರಪಂಚದಲ್ಲಿ ಬೆಳೆದ ನಾವು ಎಲ್ಲರಿಗಿಂತ ವಿಭಿನ್ನ ಜಗತ್ತನ್ನೆ ನೋಡುತ್ತೇವೆ. ನಮ್ಮ ಪ್ರಪಂಚದ ನೂರಾರು ಸ್ಥಳದಲ್ಲಿ ಮೊದಲು ಹೆಜ್ಜೆ ಇಟ್ಟ ಸವಿ ನೆನಪು ನೆನೆದಷ್ಟು ಇನ್ನು ಇಷ್ಟವಾಗುವುದು. "ನಮ್ಮ ಪ್ರಬುದ್ಧತೆಯನ್ನು ನೆನೆದು ಹೆಮ್ಮೆ ಪಡುವ ಖುಷಿಗಿಂತ ನಾವು ಪೆದ್ದು-ಪೆದ್ದಾಗಿ ಹೊಸ ಲೋಕಕ್ಕೆ ಕಾಲಿಟ್ಟ ನೆನಪುಗಳೆ ನಮ್ಮನ್ನು ಜಾಸ್ತಿ ಕಾಡುತ್ತವೆ". ಪೆದ್ದರಾಗಿ ನಡೆದು ಪ್ರಬುದ್ಧರಾಗಿ ಮೆರೆಯಲು ನಡೆದು ಬಂದ ಪೆದ್ದ-ಪೆದ್ದ ಹೆಜ್ಜೆಗುರುತುಗಳೆ ಕಾರಣವಲ್ಲವೆ.
 

     ನನ್ನವರ ಪ್ರಪಂಚದಲ್ಲಿ ಒಂದಾಗಿ ಕುಣಿದಾಡಿ ನನ್ನ ಪ್ರಪಂಚ ಅದೆಷ್ಟೊ ಹಸಿರಾಗಿದೆ. ಆ ನೆನಪುಗಳ ನೆನೆಯುತ್ತ ಬಂದ ಭಾವನೆಗಳು ಹೊಸ ಕನಸಿನ ಲೋಕವನ್ನು ಸೃಷ್ಟಿಸಿದೆ. "ಪ್ರತಿಯೊಂದು ನಾಳೆಗೂ ಇವತ್ತಿನ ದಡ್ಡತನವಿದೆ. ಇಂದು ಕಲಿಯದಿದ್ದರೆ ನಾಳೆಗೂ ನಾವು ದಡ್ಡರೆ". ಹೊಸತನ್ನು ಹುಚ್ಚರಂತೆ ಹುಡುಕಿ, ಪ್ರಾಣಿಗಳಂತೆ ದುಡಿದು, ಪೆದ್ದರಾಗಿ ಕಲಿಯುವ ಪ್ರತಿಯೊಂದು ಘಳಿಗೆಯೂ ನಾಳೆಯ ಯಶಸ್ಸಿನ ಖುಷಿ ಬಯಸಿದ್ದರೆ, ಈ ನಾಳೆಗೆ ನಿನ್ನೆಯ ಪೆದ್ದನೆ ಅತಿ ದೊಡ್ಡ ಯಶಸ್ಸು ಎಂಬ ಭಾವನೆ ಬರುವುದೆಷ್ಟು ವಿಪರ್ಯಾಸ ನೋಡಿ.

Sunday, November 28, 2010

ಭಾವನೆಗಳ ಬೆನ್ನೇರುವ ಬುದ್ಧಿವಂತರು

    ಈ ಆಧುನಿಕ ಯುಗದ ಒಂದೊಂದು ದಿನವೂ ಅದೆಷ್ಟೋ ಸಂಶೋಧನೆಗಳಿಗೆ ಸಾಕ್ಷಿಯಾಗುತ್ತಿದೆ. ಹೊಸ-ಹೊಸ ಆವಿಷ್ಕಾರಗಳು ಬದುಕಿನ ಅವಶ್ಯಕತೆಗಳಿಗೆ ಯಂತ್ರಗಳನ್ನು ಅಳವಡಿಸುತ್ತಲೇ ಇದೆ. ಬೆರಳೆಣಿಕೆಯಷ್ಟು ಸ್ವರಗಳಿಂದ ನೂರಾರು ರಾಗಗಳು, ಅಸಂಖ್ಯಾತ ಹಾಡುಗಳು ಮೂಡುತ್ತಿರುವ ಹಾಗೆ ಸಂಶೋಧನೆಗಳ ಪರಿಪೂರ್ಣತೆಯನ್ನು ಊಹಿಸಲೂ ಸಾಧ್ಯವಿಲ್ಲ. ಪರಿಪೂರ್ಣ "ಕೃತಕ ಮನುಷ್ಯ"(ರೊಬೊಟ್)ನ ಆವಿಷ್ಕಾರಕ್ಕೆ ಅದ್ಯಾವ ಕೊರತೆಯುಂಟಾಗಿರಬಹುದೆಂದು ಯೋಚಿಸಿದಾಗ ನಮಗನ್ನಿಸುವುದು ಮನುಷ್ಯನ ’ಬುದ್ಧಿಶಕ್ತಿ’, ’ಮನಸ್ಸಿನ ಭಾವನೆ’. ಈ ಕೃತಕ ಮನುಷ್ಯನಲ್ಲಿ ಸಾಕಷ್ಟು ಬುದ್ಧಿವಂತಿಕೆಯನ್ನು ತುಂಬಬಲ್ಲದೇನೊ, ಆದರೆ ಭಾವನೆಗಳಿಗೆ ಅದು ಸ್ಪಂದಿಸಬಲ್ಲದೆ?

    ಪ್ರತಿಯೊಬ್ಬನಲ್ಲೂ ಅನನ್ಯವಾಗಿರುವ ಬುದ್ಧಿ ಮತ್ತು ಭಾವನೆಗಳ ನಡುವಿರುವ ವ್ಯತ್ಯಾಸ ಮತ್ತು ಸಂಬಂಧಗಳು ಇನ್ನೂ ಕ್ಲಿಷ್ಟಕರ. ದಿನಕಳೆದಂತೆ ಬುದ್ಧಿ ಬೆಳೆಯುತ್ತದೆ, ಭಾವನೆಗಳು ಮೂಡುತ್ತವೆ. ಚುರುಕು ಬುದ್ಧಿಯಿಂದ ಮೆದುಳಿನಲ್ಲಿ ಸಂಚಲನ, ಭಾವನೆಗಳಿಂದ ಹೃದಯದಲ್ಲಿ ಸಂಚಲನ. ಒಬ್ಬ ಮನುಷ್ಯ ಯಾವುದೇ ವಿಷಯದಲ್ಲಾದರೂ ಬುದ್ಧಿವಂತಿಕೆಯನ್ನು ತೋರಬಹುದು. ಮನುಷ್ಯ ಎರಡು ವಿಧದಲ್ಲಿ ಯೋಚಿಸಬಲ್ಲ. ಒಂದು ತನ್ನ ಬುದ್ಧಿವಂತಿಕೆಯಿಂದ, ಇನ್ನೊಂದು ತನ್ನ ಮನಸ್ಸಿನಿಂದ. ನಮ್ಮ ಗೆಳೆತನದಲ್ಲಿ, ಒಡನಾಟದಲ್ಲಿ ಭಾವನೆಗಳ ಮಾತನ್ನು ಕೇಳಬೇಕು, ನಮ್ಮ ಓದಿನಲ್ಲಿ, ಕೆಲಸದಲ್ಲಿ ಬುದ್ಧಿವಂತಿಕೆಯನ್ನು ಪ್ರದರ್ಶಿಸಬೇಕಲ್ಲವೆ. ಭಾವನೆಗಳಿಗೆ ಬೆಲೆ ಕೊಡದೆ ಬುದ್ಧಿವಂತಿಕೆಯಿಂದ ಆಡುವ ಮಾತು ಒಂದು ಸ್ನೇಹ-ಪ್ರೀತಿಯ ಸಂಬಂಧಕ್ಕೆ ದ್ರೋಹ ಮಾಡಬಹುದು. ಕೇವಲ ಭಾವನೆಗಳನ್ನು ಪ್ರತಿಬಿಂಬಿಸುವ ಮಾತುಗಳಿಂದ ನಮ್ಮ ವ್ಯವಹಾರದಲ್ಲಿ ನಾವೇ ಮೋಸ ಹೋಗಬಹುದು. ಇತರರ ಭಾವನೆಗಳನ್ನು ಗೌರವಿಸಿ ಆಡುವ ಬುದ್ಧಿವಂತಿಕೆಯ ಮಾತುಗಳು, ವ್ಯವಹಾರಗಳು ಎಂದೂ ಯಾರಿಗೂ ಮೋಸ ಮಾಡದು. ಮನಸಾರೆ ಕೆಲಸ ಮಾಡುವವ ಖಂಡಿತ ದ್ರೋಹಿಯಾಗಲಾರ. ಭಾವನೆಗಳ ಬೆನ್ನೇರುವ ಬುದ್ಧಿವಂತರು ಮನಸಾರೆ ವ್ಯವಹರಿಸುವುದನ್ನು ಅರಿಯಬೇಕು.

    ಇಂತಹ ಅಗೋಚರ ವಸ್ತುಗಳ ಮೇಲೆ ನಡೆಯುವ ಸಂಶೋಧನೆಗಳು ಎಂದಿಗೂ ಪರಿಪೂರ್ಣವಾಗದು. ದೇಶವಾಳುವ ಎಷ್ಟೋ ರಾಜಕಾರಣಿಗಳು ನಿಜವಾಗಿಯೂ ಜನರ ಭಾವನೆಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತಿದ್ದರೆ, ಅವರ ಕೆಲಸ ಪರಿಪೂರ್ಣವಾಗುತ್ತಿತ್ತು. ಆದರೆ ಜನರ ಭಾವನೆಗಳನ್ನು ಗೆಲ್ಲುವ ಬುದ್ಧಿವಂತಿಕೆಯನ್ನು ಎಲ್ಲರೂ ಪ್ರದರ್ಶಿಸುತ್ತಿದ್ದಾರೆ, ಅದರಿಂದ ತಮ್ಮ ಸ್ವಾರ್ಥ ಸಾಧಿಸುತ್ತಿದ್ದಾರೆ. ಭಾವನೆಗಳನ್ನು ಗೆದ್ದು ಸ್ವಾರ್ಥ ಸಾಧಿಸುವ ಪ್ರೊಫೆಷನ್ ಜಾಸ್ತಿ ಆಗುತ್ತಿದ್ದಂತೆ, ಜನರಿಗೆ ಭಾವನೆಗಳನ್ನು ಅರಿಯುವ ನೈಜ ಜನರನ್ನು ಗುರುತಿಸುವುದು ಕಷ್ಟವಾಗುತ್ತಿದೆ. ಭಾವನೆಗಳನ್ನರಿತು ಕೆಲಸ ಮಾಡದ ಮನುಷ್ಯ ಮನುಷ್ಯನಾಗಲಾರ. ಅಂತಹವನನ್ನು ಕೃತಕವಾಗಿ ತಯಾರಿಸಬಹುದಾದರೆ ಆತನೂ ಕೃತಕವೆ.

Friday, October 22, 2010

ನನಸಾಗುವವಳ್ಯಾರೊ?












ನಿನ್ನ ಹುಡುಕಿ-ಹುಡುಕಿ ಸುಸ್ತಾದೆ
ಆದರೂ ನಿನ್ನ ಹುಡುಕಾಟ ಜಾಸ್ತಿಯಾಗಿದೆ

ಎಲ್ಲರಲ್ಲೂ ನಿನ್ನ ಕಾಣುವ ಕೌತುಕ
ನೀ ಎಲ್ಲೂ ಕಾಣದಿರುವ ಆತಂಕ

ಈ ಹೃದಯ ಪ್ರೀತಿಯರಸಿ ಹೊರಟಿದೆ
ಪ್ರೀತಿ ಕೊಡುವೆನೆಂದ ಎಷ್ಟೊ ಹೃದಯಗಳನ್ನು ತಿರಸ್ಕರಿಸಿದೆ

ನೀನಿರುವೆಯಾದರೂ ಎಲ್ಲಿ
ತುಂಬ ಕಾಯಿಸಿ ಕಾಣಿಸಿಕೊಳ್ಳುವುದಲ್ಲವೆ ನಿನ್ನ ಖುಷಿ

          ಹೃದಯದಲ್ಲಿ ಪ್ರೀತಿಯ ಅರಮನೆಯಿದೆ. ಅರಮನೆಯ ಗೋಡೆ-ಕಂಬಗಳಲ್ಲಿ ಪ್ರೇಯಸಿಯ ಗುಣಗಾನವಿದೆ. ಅಲ್ಲಲ್ಲಿ ತುಂಬ ತೇಜಸ್ಸು. ಅದು ಪ್ರೀತಿ ದೇವತೆಯ ಮಂದಿರ. ಅರಮನೆ ಅಲಂಕೃತಗೊಂಡಿದೆ. ಪ್ರೇಯಸಿಯ ಸ್ವಾಗತಕ್ಕೆ ಕ್ಷಣಗಣನೆ ಆರಂಭವಾಗಿದೆ. ಪ್ರೀತಿ ದೇವತೆಯ ಆಶೀರ್ವಾದವಿದೆಯೆಂಬ ದೃಢ ನಂಬಿಕೆ. ಆಗಾಗ ನನ್ನ ಪ್ರೇಯಸಿ ನಗುಮೊಗದಿಂದ ಬರುತ್ತಿರುವಂತೆ ಕನಸು. ನಾಚಿಕೆಯಿಂದ ಅರಮನೆಯ ಹೂದೋಟದಲ್ಲೆ ಕುಳಿತಿರುವಳೇನೊ, ಹೂರಾಶಿಯ ಪರಿಮಳ ಆಕೆಯನ್ನು ಸೆಳೆಯಿತೇನೊ, ನೀರಿನ ಬುಗ್ಗೆ ತನ್ನ ಹನಿಯನ್ನು ಪ್ರೇಯಸಿಯೆಡೆ ಚಿಮ್ಮಿಸಿ ಅತ್ತ ಕಡೆ ಆಮಂತ್ರಿಸಿತೇನೊ, ಹಳ್ಳ-ಕೊಳ್ಳಗಳ ಹರಿವಿನ ನಿನಾದ ಆಕೆಯ ದಿಕ್ಕು ತಪ್ಪಿಸಿತೇನೊ ಎಂಬೆಲ್ಲ ಭ್ರಮೆ. ಪ್ರೀತಿಯರಮನೆಯ ಗೋಡೆ-ಕಂಬಗಳು ಸೂಚಿಸುವ ಪ್ರೇಯಸಿಯ ಗುಣಗಾನ ಮಾಡುತ್ತ ಕಾಲ ಕಳೆಯುತ್ತಿದೆ. ಕನಸಿನ ರಾಣಿಯ ಮೇಲೆ ಅದೆಷ್ಟು ನಿರೀಕ್ಶೆ! ಅದೆಷ್ಟು ಗುಣಗಾನ  ಮಾಡಬಹುದು.

          ಈಗೆಲ್ಲ ಇಂತವರೆಲ್ಲಿ ಸಿಗುತ್ತಾರೆಯೆಂದು ಗೋಡೆಯ ಮೇಲೆ ಬರೆದಿರುವ ಗುಣಗಾನವನ್ನು ಒಂದೊಂದಾಗಿ ಅಳಿಸುವ ಕೆಲಸ ಶುರುವಾಗಿದೆ. ವರ್ಣರಂಜಿತ ಬಣ್ಣಗಳು ಪ್ರೇಯಸಿಯ ಮೇಲಿರುವ ನಿರೀಕ್ಷೆಗೆ ಸಾಕ್ಷಿಯಾಗಿದ್ದ ಬರಹಗಳ ಮೇಲೆ ಕುಳಿತು ಗೋಡೆಯ ಮೆರುಗನ್ನು ಹೆಚ್ಚಿಸಿವೆ. ಈಗೇನೊ ಕನಸಿನ ರಾಣಿಯೆಂದು ಹೇಳುತ್ತಿರುವೆ. ಮುಂದೆ ನನಸಾಗುವವಳ್ಯಾರೊ? ಹೃದಯದರಮನೆಯ ಗೋಡೆ-ಕಂಬಗಳು ಸಂಪೂರ್ಣ ವರ್ಣರಂಜಿತವಾಗದೆ ಒಂದೆರಡು ಗುಣಗಾನಗಳು ಶಾಶ್ವತವಾಗಿ ಉಳಿದರೆ ನಮ್ಮ ಮೊಗದಲ್ಲಿ ಆಗಾಗ ನಗುವಿನ ಹೂವು ಅರಳಬಲ್ಲದಲ್ಲವೆ?

Sunday, October 17, 2010

ಪ್ರೀತಿ-ಪ್ರೇಮ


ಪ್ರೀತಿ-ಪ್ರೇಮ ಎಂದಾಗ ಹುಡುಗರಿಗೆಲ್ಲ ತಮ್ಮ ಡ್ರೀಮ್ ಗರ್ಲ್ ಹಾಗೂ ಹುಡ್ಗೀರ್ಗೆಲ್ಲ ತಮ್ಮ ಡ್ರೀಮ್ ಬಾಯ್ ನೆನಪಾಗೋದು ಸಹಜ. ಹಾಲಿವುಡ್ ನಲ್ಲಾಗಲಿ ಬಾಲಿವುಡ್ ನಲ್ಲಾಗಲಿ ಕನಸಿನ ಪ್ರಿಯತಮೆಯಿದ್ದರೆ, ಕೈಗೆ ಸಿಗದ ತಾರೆಯನ್ನು ಮುಟ್ಟುವ ಪ್ರಯತ್ನ ಯಾರೂ ಮಾಡಲಾರರು. ಮಿನುಗುವ ತಾರೆ ದೂರದಿಂದ ಮಾತ್ರ ಸುಂದರವಲ್ಲವೆ! ಹಾಗಾದರೆ ಕೈಗೆಟುಕುವ ಈ ಪ್ರೀತಿ-ಪ್ರೇಮದ ಅನುಭವ ಎಷ್ಟು ಸುಂದರ? ಅದರೊಡಗೂಡಿ ಮೂಡುವ ಮುಂದಿನ ಜೀವನ ಹೇಗಿರಬಹುದು? ನಮ್ಮ ಸುತ್ತ-ಮುತ್ತ ನಾವೆ ಬಯಸಿ ಸಿಗುವ ಪ್ರೀತಿಯ ಬಂಧನ ಶಾಶ್ವತವೆ? ಅಂತಹ ಅನುಪಮ ಶಾಶ್ವತ ಪ್ರೀತಿಯ ಹುಡುಕಾಟದಲ್ಲಿ ಪ್ರತಿಯೊಬ್ಬನೂ ಒಂದಲ್ಲ ಒಂದು ಬಾರಿ ತೊಡಗಿರುತ್ತಾನೆ. ಈ ಸಮಯದಲ್ಲಿ ಆಗಬಹುದಾದ ಸರಿ-ತಪ್ಪುಗಳನ್ನು ಅವಲೋಕಿಸತೊಡಗಿದಾಗ ನನ್ನ ಮನಸಿಗೆ ಬಂದ ಸಾರಾಂಶವನ್ನು ಈ ಬ್ಲಾಗ್ ನಲ್ಲಿ ತೆರೆದಿಡುವ ಪ್ರಯತ್ನ ಮಾಡಿದ್ದೇನೆ.


        ನಮ್ಮನ್ನು ಸಾಮಾನ್ಯವಾಗಿ ಆಕರ್ಷಿಸುವುದು ಸೌಂದರ್ಯ, ಸಾಧನೆ, ಐಶ್ವರ್ಯ. ಪ್ರೀತಿಯ ಮಳೆಹನಿಗೆ ಮಾತುಗಳೂ ಮೋಡವಾಗಬಹುದು. ಕೆಲವೊಬ್ಬರು, ನಾವು ಬಾಳುವುದು ವ್ಯಕ್ತಿಯ ವ್ಯಕ್ತಿತ್ವದ ಜೊತೆ ಎನ್ನುವುದನ್ನು ಮರೆತು ಬಿಡುತ್ತಾರೆ. ಆ ಸತ್ಯವನ್ನು ಒಂದೊಂದು ಬಾರಿ ಕಣ್ಮುಚ್ಚಿ ನೆನೆದುಕೊಳ್ಳುವ ಅವಶ್ಯಕತೆಯಿರುತ್ತದೆ. ಯಾಕೆಂದರೆ ಪ್ರೀತಿ-ಪ್ರೇಮದ ಬಲೆಗೆ ಸಿಕ್ಕ ಮೇಲೆ ಹೊರಬರುವುದು ಕಷ್ಟವಾಗಲೂಬಹುದು. ಅಂತಹ ಬಂಧನವನ್ನು ಮನಸಾರೆ ಇಷ್ಟ ಪಡಬೇಕೆ ಹೊರತು ಇಷ್ಟ ಪಡುವುದು ಅನಿವಾರ್ಯವಾಗಬಾರದಲ್ಲವೆ. ವ್ಯಕ್ತಿಯ ವ್ಯಕ್ತಿತ್ವವನ್ನು ಆತನ/ಆಕೆಯ ಸೌಂದರ್ಯ, ಸಾಧನೆ, ಐಶ್ವರ್ಯ, ಕೌಟುಂಬಿಕ ಹಿನ್ನೆಲೆಗಳು ಖಂಡಿತವಗಿಯೂ ಪ್ರಭಾವ ಬೀರುತ್ತವೆ. "ನಮಗೆ ಅನುರೂಪವಾದ ವ್ಯಕ್ತಿತ್ವದ ಆಯ್ಕೆಗೆ, ನಮ್ಮ ವ್ಯಕ್ತಿತ್ವದ ಅರಿವು ಸಾಕಾಗಬಲ್ಲದು" ಎನ್ನುವುದು ನನ್ನ ಅಭಿಪ್ರಾಯ. ಎಲ್ಲರೂ ತಮಗೆ ಅನುರೂಪವಾದ ವ್ಯಕ್ತಿತ್ವವನ್ನು ಪ್ರೀತಿಸಲಿ, ಪ್ರೀತಿಯ ಬಂಧನ ಶಾಶ್ವತವಾಗಲಿ.


        ಪ್ರೀತಿ-ಪ್ರೇಮ, ಜೀವನ ಇಂತಹ ವಿಷಯಗಳಲ್ಲಿ ನಾನೇನು ಅನುಭವಿಯಲ್ಲ. ನನ್ನ ಅನಿಸಿಕೆಯನ್ನು ವ್ಯಕ್ತಪಡಿಸಿದ್ದೇನೆ. ನನ್ನ ಮನಸಿನ ಮಾತುಗಳಿಗೆ ನಿಮ್ಮ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತೇನೆ.

Monday, October 11, 2010

ಮನಸಿನ ಮಾತು



ಇಲ್ಲಿ ನಾನು ಬರೆಯುತ್ತಿರುವುದೆಲ್ಲ ನನ್ನ ಮನಸಿಗೆ ಅನ್ನಿಸಿದ್ದು, ನಾನು ತಿಳಿದುಕೊಂಡದ್ದು. ಇಲ್ಲಿಯ ಮಾತುಗಳನ್ನೆಲ್ಲ ನೀವು ನನ್ನ ಜೀವನ ಶೈಲಿಯಲ್ಲಿ, ನಡತೆಯಲ್ಲಿ ಕಾಣಬಹುದೇನೊ. ನನ್ನ ಮನಸಿನ ಆಳದಲ್ಲಿರುವ ವಿಚಾರಗಳನ್ನೆಲ್ಲ ಹುಡುಕುತ್ತ ಬರೆದಿರುವ ನನ್ನ "ಮನಸಿನ ಮಾತು" ಈ ಬರಹ.


ಜೀವನ ಮತ್ತು ಅದರ ಮೌಲ್ಯಗಳ ಕುರಿತೆಲ್ಲ ಮಾತನಾಡುವ ಪ್ರಬುದ್ಧ ವಯಸ್ಸು ನನ್ನದಲ್ಲ. ಆದರು ಕೂಡ ಚಿಕ್ಕ- ಪುಟ್ಟ ಅನುಭವಗಳ ಸುತ್ತ ಬರುವ ಚಿಂತನೆಗಳನ್ನು ನಾವು ಅನುಭವಿಸಿದರೆ ಧನಾತ್ಮಕ ಬೆಳವಣಿಗೆ ಕಂಡು ಬರಬಹುದಲ್ಲವೇ. ನಮ್ಮ ಈ ಪಯಣ ಎಷ್ಟೊಂದು ಸೋಲು-ಗೆಲುವುಗಳಿಂದ ತುಂಬಿರುತ್ತದೆ. ನಮಗಾಗುವ ಪ್ರತಿಯೊಂದು ಸೋಲು-ಗೆಲುವಿಗೂ ನಾವೇ ಹೊಣೆಯಲ್ಲವೆ. ನಮ್ಮ ಒಂದು ಗೆಳೆತನದಲ್ಲಿ ಮೋಸವಾದರೆ ಗೆಳೆತನ ಬಯಸಿದ ನಾವೇ ಮೂರ್ಖರಲ್ಲವೆ. ಇಂತಹ ಒಂದು ಪ್ರಮಾದದಿಂದ ಎಷ್ಟೊಂದು ನಾವು ಮನ ನೊಂದುಕೊಳ್ಳುತ್ತೇವೆ. ಹಾಗಾದರೆ ಮನುಷ್ಯನ ಒಳ್ಳೆತನ, ಪ್ರಾಮಾಣಿಕತೆಯನ್ನು ಅಳೆಯುವ ಮಾಪನದ ಸಂಶೋಧನೆ ನಡೆಯಬೇಕೆ?


ಸಾಮಾನ್ಯವಾಗಿ ಪ್ರತಿಯೊಬ್ಬ ತಂದೆ-ತಾಯಿಯು ತಮ್ಮ ಮಕ್ಕಳಿಗೆ ಶಿಷ್ಟಾಚಾರವನ್ನು ಕಲಿಸುತ್ತಾರೆ. ನನಗನ್ನಿಸುವ ಪ್ರಕಾರ "ನೀವೇನಾದ್ರು ನನ್ನಲ್ಲಿ ಒಳ್ಳೆತನವನ್ನು ಕಂಡರೆ ಅದು ನನ್ನ ಅಪ್ಪ-ಅಮ್ಮ ಕಲಿಸಿದ್ದು. ನನ್ನಿಂದ ಏನಾದ್ರು ಪ್ರಮಾದ ನಡೆದು ಹೋದರೆ ಅದು ನಾನು ಬೆಳೆಸಿಕೊಂಡ ಗುಣ". ನಾನು ಅನೇಕ ಬಾರಿ ನನ್ನ ಮನೆಯವರು, ನಾನು ಹುಟ್ಟಿ-ಬೆಳೆದ ಊರು, ನನ್ನ ಎಷ್ಟೋ ಜನ ಬಂಧು-ಬಳಗ, ಗೆಳೆಯರನ್ನು ನೆನೆದುಕೊಂಡು ನಾನು ನಿಜವಾಗಿಯೂ ಪುಣ್ಯವಂತ ಎಂದು ಸಂತೋಷ ಪಟ್ಟಿದ್ದೇನೆ. ಎಲ್ಲ ಹೇಳುವಂತೆ ಮುಖ-ಮಾತು ಮನಸ್ಸಿನ ಕನ್ನಡಿಯಂತೆ. ಆದರು ನಿಜವಾದ ಮನುಷ್ಯನ ಆಂತರ್ಯದ ಅರಿವಾಗುವುದು ಒಡನಾಟದಿಂದ ಹಾಗು ಅವನ ಸೂಕ್ಷ್ಮ ವೀಕ್ಷಣೆಯಿಂದ ಮಾತ್ರ ಎನ್ನುವುದು ನನ್ನ ಭಾವನೆ.

ನನಗೆ ಪ್ರತಿಯೊಬ್ಬನ ಮನಸ್ಸನ್ನು ಅರಿಯುವ ಕುತೂಹಲವಿದೆ. ವಿಶ್ವದ ಎಲ್ಲ ರೀತಿಯ ಮನುಷ್ಯರ ಜೀವನ ಶೈಲಿಯನ್ನು ತಿಳಿದುಕೊಳ್ಳುವ ಹಂಬಲವಿದೆ.ನನ್ನೀ ಜೀವನಕ್ಕೊಂದು ಅಡಿಪಾಯ ಹಾಕಿಕೊಂಡು ನನ್ನ ಕನಸನ್ನು ಸಾಕಾರಗೊಳಿಸುವತ್ತ ಪಯಣ ಬೆಳೆಸಲು ಮುಂದಾಗುತ್ತೇನೆ. ನಮಗೆ ಸಿಗುವ ಖುಷಿ ಸುಖವೆಲ್ಲ ನಮ್ಮ ಪ್ರಾಮಾಣಿಕ ಪ್ರಯತ್ನಗಳ ಫಲಶ್ರುತಿಯೆಂದು ನಾವು ನಡೆದು ಬಂದ ದಾರಿಯ ಸೂಕ್ಷ್ಮಾವಲೋಕನದಿಂದ ತಿಳಿದು ಬರುತ್ತದೆ. ನಾನೊಬ್ಬ ಬರಹಗಾರನಲ್ಲ. ನನ್ನ ಮನಸ್ಸಿನ ಭಾವನೆಗಳನ್ನು ಕೆದಕುತ್ತ ಬರೆದಿರುವ ಈ ಬರಹದಲ್ಲಿ ಒಂದು ಮಾದರಿ ಲೇಖನದ ಗುಣಲಕ್ಷಣಗಳು ಇಲ್ಲದಿರಬಹುದು. ನನ್ನ ಮೊದಲ ಬ್ಲಾಗ್ ನಲ್ಲಿ ನನ್ನ ಕೆಲವು ಮನಸ್ಸಿನ ಮಾತುಗಳನ್ನು ವ್ಯಕ್ತಪಡಿಸಿದ್ದೇನೆ. ಮುಂದಿನ ಬ್ಲಾಗ್ ಗಳಲ್ಲಿ ಕೆಲವೊಂದು ಪ್ರವಾಸದ ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.