Monday, July 11, 2011

ಪೆದ್ದು-ಪೆದ್ದಾಗಿ ನಾವು ಬಂದ ನೆನಪುಗಳು

ಅನುಭವವಿಲ್ಲದೆ ಯಾವುದಾದರು ಕೆಲಸ ಆರಂಭಿಸುವುದು, ಕೆಲಸದ ಚಿಕ್ಕ-ಚಿಕ್ಕ ಭಾಗಗಳನ್ನೆಲ್ಲ ಕಷ್ಟಪಟ್ಟು ಒಂದೊಂದಾಗಿ ಮುಗಿಸುವುದು, ಸಾಸಿವೆಯಷ್ಟು ಅನುಭವಗಳನ್ನೆಲ್ಲ ಕೂಡಿಹಾಕಿ ಮುಂದೆ ಹೆಜ್ಜೆ ಇಡುತ್ತ ಸಾಗುವುದು. ನಮ್ಮ ಗುರಿ ಸಾಧಿಸುವಷ್ಟರಲ್ಲಿ ಜೊತೆಯಲ್ಲಿ ನಡೆದವರ ನೆನಪುಗಳು, ಕೈ ಹಿಡಿದು ನಡೆಸಿದ ನೆನಪುಗಳು, ಆತಂಕ ಹುಟ್ಟಿಸಿದ ಕ್ಶಣಗಳ ನೆನಪುಗಳು ನಮಗೆ ಬೇಕಾದ ಫಲಿತಾಂಶಕ್ಕಿಂತ ಹೆಚ್ಚು ನಮ್ಮಲ್ಲಿ ಉಳಿದು ಬಿಡುತ್ತವೆ.

     ಈ ವಿಶಾಲ ಜಗತ್ತಿನಲ್ಲಿ ನನ್ನ ಪ್ರಪಂಚವೆ ಬೇರೆ, ನಿಮ್ಮ ಪ್ರಪಂಚವೆ ಬೇರೆ ಎನ್ನುವುದು ಸ್ವಲ್ಪ ಮಟ್ಟಿಗೆ ನಿಜವೆ. ನಾವು ಹುಟ್ಟಿ ಬೆಳೆದ ಜಾಗ, ಸ್ನೇಹಿತರೊಡನೆಯ ಒಡನಾಟ ಸೃಷ್ಟಿಸುವ ನಮ್ಮ ಪ್ರಪಂಚದಲ್ಲಿ ಬೆಳೆದ ನಾವು ಎಲ್ಲರಿಗಿಂತ ವಿಭಿನ್ನ ಜಗತ್ತನ್ನೆ ನೋಡುತ್ತೇವೆ. ನಮ್ಮ ಪ್ರಪಂಚದ ನೂರಾರು ಸ್ಥಳದಲ್ಲಿ ಮೊದಲು ಹೆಜ್ಜೆ ಇಟ್ಟ ಸವಿ ನೆನಪು ನೆನೆದಷ್ಟು ಇನ್ನು ಇಷ್ಟವಾಗುವುದು. "ನಮ್ಮ ಪ್ರಬುದ್ಧತೆಯನ್ನು ನೆನೆದು ಹೆಮ್ಮೆ ಪಡುವ ಖುಷಿಗಿಂತ ನಾವು ಪೆದ್ದು-ಪೆದ್ದಾಗಿ ಹೊಸ ಲೋಕಕ್ಕೆ ಕಾಲಿಟ್ಟ ನೆನಪುಗಳೆ ನಮ್ಮನ್ನು ಜಾಸ್ತಿ ಕಾಡುತ್ತವೆ". ಪೆದ್ದರಾಗಿ ನಡೆದು ಪ್ರಬುದ್ಧರಾಗಿ ಮೆರೆಯಲು ನಡೆದು ಬಂದ ಪೆದ್ದ-ಪೆದ್ದ ಹೆಜ್ಜೆಗುರುತುಗಳೆ ಕಾರಣವಲ್ಲವೆ.
 

     ನನ್ನವರ ಪ್ರಪಂಚದಲ್ಲಿ ಒಂದಾಗಿ ಕುಣಿದಾಡಿ ನನ್ನ ಪ್ರಪಂಚ ಅದೆಷ್ಟೊ ಹಸಿರಾಗಿದೆ. ಆ ನೆನಪುಗಳ ನೆನೆಯುತ್ತ ಬಂದ ಭಾವನೆಗಳು ಹೊಸ ಕನಸಿನ ಲೋಕವನ್ನು ಸೃಷ್ಟಿಸಿದೆ. "ಪ್ರತಿಯೊಂದು ನಾಳೆಗೂ ಇವತ್ತಿನ ದಡ್ಡತನವಿದೆ. ಇಂದು ಕಲಿಯದಿದ್ದರೆ ನಾಳೆಗೂ ನಾವು ದಡ್ಡರೆ". ಹೊಸತನ್ನು ಹುಚ್ಚರಂತೆ ಹುಡುಕಿ, ಪ್ರಾಣಿಗಳಂತೆ ದುಡಿದು, ಪೆದ್ದರಾಗಿ ಕಲಿಯುವ ಪ್ರತಿಯೊಂದು ಘಳಿಗೆಯೂ ನಾಳೆಯ ಯಶಸ್ಸಿನ ಖುಷಿ ಬಯಸಿದ್ದರೆ, ಈ ನಾಳೆಗೆ ನಿನ್ನೆಯ ಪೆದ್ದನೆ ಅತಿ ದೊಡ್ಡ ಯಶಸ್ಸು ಎಂಬ ಭಾವನೆ ಬರುವುದೆಷ್ಟು ವಿಪರ್ಯಾಸ ನೋಡಿ.