Thursday, February 27, 2014

ನಿದ್ದೆ ಬರದಾ ರಾತ್ರಿ


ನಿದ್ದೆ ಬರದ ಆ ರಾತ್ರಿಯೆಲ್ಲ ಕಳೆದುಕೊಂಡ, ಕಳೆದುಕೊಳ್ಳುತ್ತಿರುವ ಖುಶಿಯ ನೆನಪಲ್ಲೆ ಕಳೆಯುತ್ತಿತ್ತು. ಈ ನಿದ್ದೆ ಬರದ ರಾತ್ರಿಗಳಲ್ಲಿ ನಿರಾಸೆಯ ವಿಚಾರಗಳು ತುಂಬುತ್ತದೊ ಅಥವ ಈ ನಿರಾಸೆಯ ವಿಚಾರಗಳೆ ನಿದ್ದೆಗೆಡಿಸುತ್ತದೊ ಎನ್ನುವುದು ಇನ್ನೂ ನನ್ನಲ್ಲಿರುವ ಪ್ರಶ್ನೆ. ಹಾಸಿಗೆಯಲ್ಲಿ ಬಿದ್ದು ಒಂದು ಘಂಟೆಯೆ ಆಗಿರಬಹುದೆಂದು ಅಂದಾಜಿಸಿದೆ. ಅಷ್ಟರಲ್ಲೆ ಒಂದು sad ಸ್ಟೋರಿಯ ವಿಸ್ತ್ರುತ ಹೈಲೈಟ್ ಮುಗಿದಿತ್ತು.ಅಂತೂ ಮುಗೀತಲ್ಲ ಎಂದು ಸ್ವಲ್ಪ ನೆಮ್ಮದಿಯಿಂದ ಕಣ್ಮುಚ್ಚಿದರೆ, ಮತ್ತೊಂದು ಘಂಟೆ ಸುಮಾರಿಗೆ ಅದೇ ಹೈಲೈಟ್ಸ್ ನನಗರಿವಿಲ್ಲದೆ ಮರುಕಳಿಸುತ್ತಿತ್ತು. ಹೊತ್ತು ಗೊತ್ತಿಲ್ಲದೆ ಟೀ ಕುಡಿದರೆ ನಿದ್ದೆ ಹೇಗೆ ಬಂದೀತು ಎಂದು ನನಗೇ ಬೈದುಕೊಂಡೆ.

ಇಷ್ಟು ಹೊತ್ತಂತೂ ಹೀಗೇ ಕಳೆದೋಯ್ತು, ಇನ್ನಾದರು ನಿರಾಲೋಚಿತನಾಗಿ, ನಿರಾತಂಕವಾಗಿ ನಿದ್ದೆಗೆ ಜಾರೋಣವೆಂದು ದ್ರುಢ ನಿರ್ಧಾರ ಮಾಡೆ ಬಿಟ್ಟೆ. ಅಷ್ಟರಲ್ಲೆ ಬ್ಯಾಕ್ ಗ್ರೌಂಡ್ ನಲ್ಲಿ ಕುಯ್ಯ್ ಎನ್ನುತ್ತಿದ್ದ ನುಷಿ ಹೊಡೆಯಲು ಕಣ್ತೆರೆದರೆ ಎಲ್ಲೆಲ್ಲೂ ಕಗ್ಗತ್ತಲೆ. ಹಾಗೆ ಮೂರ್ನಾಲ್ಕು ಬಾರಿ ಕಣ್ಮುಚ್ಚಿ ಕಣ್ತೆರೆದೆ. ಎಲ್ಲವೂ ಒಂದೆ. ಕತ್ತಲು. ಇನ್ನೊಂದು ಬಾರಿ ಕಣ್ಮುಚ್ಚಿ ತೆರೆಯುವ ಪ್ರಯತ್ನ ಮಾಡೋಣವೆಂದರೆ, ಈಗಿನ ಸ್ಥಿತಿಯೇ ತಿಳಿಯದಂತಾಯ್ತು. ಕಣ್ಮುಚ್ಚಿರುವೆನೋ? ತೆರೆದಿರುವೆನೊ? ಈ ಬಾರಿ ಕಣ್ಣ ರೆಪ್ಪೆ ಹುಬ್ಬಿಗೆ ಬಡಿಯುವಂತೆ ಗಟ್ಟಿಯಾಗಿ ಕಣ್ತೆರೆದೆ. ಕಣ್ತೆರೆದ ಅನುಭವ ಈಗ ಸ್ವಲ್ಪ ಆಯ್ತು. ಆದರೂ ನಿದ್ದೆಯಾಕೋ ಬರುವಂತೆ ಕಾಣುತ್ತಿಲ್ಲ. ಸ್ವಲ್ಪ ಸೆಖೆ ಬೇರೆ. ಹೊದೆದ ಚಾದರವನ್ನು ಪಕ್ಕಕ್ಕೆಸೆದೆ. ಅಲ್ಲೇ ನೆಲಕ್ಕೆ ಉರುಳಿ ವಾಪಸ್ ಹಾಸಿಗೆಗೆ ಬಂದೆ. ತಂಪು ನೆಲದಿಂದ ಮೈ ಸ್ವಲ್ಪ ತಂಪಾದರೂ ಬೆನ್ನ ಮಧ್ಯೆ ಏನೋ ಚುಚ್ಚಿತ್ತು.


ಇಷ್ಟೆಲ್ಲ ನಿರಾಶನಾಗಿರುವ ನನಗೆ ನಿಜವಾಗಿಯೂ ಅಂಥದ್ದೇನಾಗಿದೆ ಎಂಬ ವಿಚಾರ ನಂತರ ಬರಲಾರಂಭಿಸಿತು. ಹಾಸಿಗೆಯಲ್ಲೇ ಮಲಗಿದ್ದೇನೆ. ಹೊದೆಯಲು ಚಾದರವಿದೆ. ಬಾಯರಿಕೆಯಾದರೆ ಪಕ್ಕದಲ್ಲೇ ನೀರಿದೆ. ರಾತ್ರಿ ಬೇರೆ ಹೊಟ್ಟೆ ಬಿರಿ ಊಟ ಮಾದಿದ್ದೇನೆ. ಖುಷಿಯಿಂದ ಮಾತನಾಡಿಸುವ ಜನ, ಮನರಂಜನೆಗೆ ಹತ್ತಾರು ಮಾಧ್ಯಮಗಳು, ಇವೆಲ್ಲ ಇವೆಯಲ್ಲ ಅಂದುಕೊಳ್ಳುವಷ್ಟರಲ್ಲಿ ಒಂದು ಅದ್ಭುತ ನಿದ್ದೆ ಜಂಪಿಗೆ ಮೈ ನಡುಗಿತ್ತು. ಓಹೋ ನಿದ್ದೆಯ ಗುಟ್ಟು ಇದೇ ಇರಬಹುದು ನೋಡಿ ಅನ್ನುವಷ್ಟರಲ್ಲಿ ಬೆಳಕೇ ಮನೆ ತುಂಬಾ ಹರಡಿತ್ತು.

No comments:

Post a Comment