ಈ ಆಧುನಿಕ ಯುಗದ ಒಂದೊಂದು ದಿನವೂ ಅದೆಷ್ಟೋ ಸಂಶೋಧನೆಗಳಿಗೆ ಸಾಕ್ಷಿಯಾಗುತ್ತಿದೆ. ಹೊಸ-ಹೊಸ ಆವಿಷ್ಕಾರಗಳು ಬದುಕಿನ ಅವಶ್ಯಕತೆಗಳಿಗೆ ಯಂತ್ರಗಳನ್ನು ಅಳವಡಿಸುತ್ತಲೇ ಇದೆ. ಬೆರಳೆಣಿಕೆಯಷ್ಟು ಸ್ವರಗಳಿಂದ ನೂರಾರು ರಾಗಗಳು, ಅಸಂಖ್ಯಾತ ಹಾಡುಗಳು ಮೂಡುತ್ತಿರುವ ಹಾಗೆ ಸಂಶೋಧನೆಗಳ ಪರಿಪೂರ್ಣತೆಯನ್ನು ಊಹಿಸಲೂ ಸಾಧ್ಯವಿಲ್ಲ. ಪರಿಪೂರ್ಣ "ಕೃತಕ ಮನುಷ್ಯ"(ರೊಬೊಟ್)ನ ಆವಿಷ್ಕಾರಕ್ಕೆ ಅದ್ಯಾವ ಕೊರತೆಯುಂಟಾಗಿರಬಹುದೆಂದು ಯೋಚಿಸಿದಾಗ ನಮಗನ್ನಿಸುವುದು ಮನುಷ್ಯನ ’ಬುದ್ಧಿಶಕ್ತಿ’, ’ಮನಸ್ಸಿನ ಭಾವನೆ’. ಈ ಕೃತಕ ಮನುಷ್ಯನಲ್ಲಿ ಸಾಕಷ್ಟು ಬುದ್ಧಿವಂತಿಕೆಯನ್ನು ತುಂಬಬಲ್ಲದೇನೊ, ಆದರೆ ಭಾವನೆಗಳಿಗೆ ಅದು ಸ್ಪಂದಿಸಬಲ್ಲದೆ?
ಪ್ರತಿಯೊಬ್ಬನಲ್ಲೂ ಅನನ್ಯವಾಗಿರುವ ಬುದ್ಧಿ ಮತ್ತು ಭಾವನೆಗಳ ನಡುವಿರುವ ವ್ಯತ್ಯಾಸ ಮತ್ತು ಸಂಬಂಧಗಳು ಇನ್ನೂ ಕ್ಲಿಷ್ಟಕರ. ದಿನಕಳೆದಂತೆ ಬುದ್ಧಿ ಬೆಳೆಯುತ್ತದೆ, ಭಾವನೆಗಳು ಮೂಡುತ್ತವೆ. ಚುರುಕು ಬುದ್ಧಿಯಿಂದ ಮೆದುಳಿನಲ್ಲಿ ಸಂಚಲನ, ಭಾವನೆಗಳಿಂದ ಹೃದಯದಲ್ಲಿ ಸಂಚಲನ. ಒಬ್ಬ ಮನುಷ್ಯ ಯಾವುದೇ ವಿಷಯದಲ್ಲಾದರೂ ಬುದ್ಧಿವಂತಿಕೆಯನ್ನು ತೋರಬಹುದು. ಮನುಷ್ಯ ಎರಡು ವಿಧದಲ್ಲಿ ಯೋಚಿಸಬಲ್ಲ. ಒಂದು ತನ್ನ ಬುದ್ಧಿವಂತಿಕೆಯಿಂದ, ಇನ್ನೊಂದು ತನ್ನ ಮನಸ್ಸಿನಿಂದ. ನಮ್ಮ ಗೆಳೆತನದಲ್ಲಿ, ಒಡನಾಟದಲ್ಲಿ ಭಾವನೆಗಳ ಮಾತನ್ನು ಕೇಳಬೇಕು, ನಮ್ಮ ಓದಿನಲ್ಲಿ, ಕೆಲಸದಲ್ಲಿ ಬುದ್ಧಿವಂತಿಕೆಯನ್ನು ಪ್ರದರ್ಶಿಸಬೇಕಲ್ಲವೆ. ಭಾವನೆಗಳಿಗೆ ಬೆಲೆ ಕೊಡದೆ ಬುದ್ಧಿವಂತಿಕೆಯಿಂದ ಆಡುವ ಮಾತು ಒಂದು ಸ್ನೇಹ-ಪ್ರೀತಿಯ ಸಂಬಂಧಕ್ಕೆ ದ್ರೋಹ ಮಾಡಬಹುದು. ಕೇವಲ ಭಾವನೆಗಳನ್ನು ಪ್ರತಿಬಿಂಬಿಸುವ ಮಾತುಗಳಿಂದ ನಮ್ಮ ವ್ಯವಹಾರದಲ್ಲಿ ನಾವೇ ಮೋಸ ಹೋಗಬಹುದು. ಇತರರ ಭಾವನೆಗಳನ್ನು ಗೌರವಿಸಿ ಆಡುವ ಬುದ್ಧಿವಂತಿಕೆಯ ಮಾತುಗಳು, ವ್ಯವಹಾರಗಳು ಎಂದೂ ಯಾರಿಗೂ ಮೋಸ ಮಾಡದು. ಮನಸಾರೆ ಕೆಲಸ ಮಾಡುವವ ಖಂಡಿತ ದ್ರೋಹಿಯಾಗಲಾರ. ಭಾವನೆಗಳ ಬೆನ್ನೇರುವ ಬುದ್ಧಿವಂತರು ಮನಸಾರೆ ವ್ಯವಹರಿಸುವುದನ್ನು ಅರಿಯಬೇಕು.
ಇಂತಹ ಅಗೋಚರ ವಸ್ತುಗಳ ಮೇಲೆ ನಡೆಯುವ ಸಂಶೋಧನೆಗಳು ಎಂದಿಗೂ ಪರಿಪೂರ್ಣವಾಗದು. ದೇಶವಾಳುವ ಎಷ್ಟೋ ರಾಜಕಾರಣಿಗಳು ನಿಜವಾಗಿಯೂ ಜನರ ಭಾವನೆಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತಿದ್ದರೆ, ಅವರ ಕೆಲಸ ಪರಿಪೂರ್ಣವಾಗುತ್ತಿತ್ತು. ಆದರೆ ಜನರ ಭಾವನೆಗಳನ್ನು ಗೆಲ್ಲುವ ಬುದ್ಧಿವಂತಿಕೆಯನ್ನು ಎಲ್ಲರೂ ಪ್ರದರ್ಶಿಸುತ್ತಿದ್ದಾರೆ, ಅದರಿಂದ ತಮ್ಮ ಸ್ವಾರ್ಥ ಸಾಧಿಸುತ್ತಿದ್ದಾರೆ. ಭಾವನೆಗಳನ್ನು ಗೆದ್ದು ಸ್ವಾರ್ಥ ಸಾಧಿಸುವ ಪ್ರೊಫೆಷನ್ ಜಾಸ್ತಿ ಆಗುತ್ತಿದ್ದಂತೆ, ಜನರಿಗೆ ಭಾವನೆಗಳನ್ನು ಅರಿಯುವ ನೈಜ ಜನರನ್ನು ಗುರುತಿಸುವುದು ಕಷ್ಟವಾಗುತ್ತಿದೆ. ಭಾವನೆಗಳನ್ನರಿತು ಕೆಲಸ ಮಾಡದ ಮನುಷ್ಯ ಮನುಷ್ಯನಾಗಲಾರ. ಅಂತಹವನನ್ನು ಕೃತಕವಾಗಿ ತಯಾರಿಸಬಹುದಾದರೆ ಆತನೂ ಕೃತಕವೆ.